Message from Chairman

Sri. G D Harish, B.E

Chairman

ನಾವೆಲ್ಲಾ ಗಮನಿಸುತ್ತಿರುವಂತೆ ಬ್ಯಾಂಕುಗಳ ಶ್ರೇಣೀಕರಣ ಪದ್ಧತಿ ಮತ್ತು ಜನರ ಆದ್ಯತೆಗಳಿಗೆ ಅನುಸಾರವಾಗಿ ವಿವಿಧ ರೀತಿಯ ಆರ್ಥಿಕ ಯೋಜನೆಗಳನ್ನು ರೂಪಿಸುವಂತಹ ಆಡಳಿತಾತ್ಮಕ ನಿರ್ಧಾರ ನಮ್ಮ ದೇಶದ ಬ್ಯಾಂಕಿಂಗ್ ವಲಯಕ್ಕೆ ನೀಡಿದ ದೊಡ್ಡ ಕೊಡುಗೆ. ಇದಕ್ಕೆ ತಕ್ಕಂತೆ ಕಳೆದ ೬೧ ವರ್ಷಗಳಿಂದ ’ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್’ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಕೃಷಿಕರ ಅಗತ್ಯತೆಗಳನ್ನು ಅವರ ಬೇಡಿಕೆಗೆ ಅನುಸಾರವಾಗಿ ಪೂರೈಸುತ್ತಾ ಬಂದಿದೆ. ಈ ಮೂಲಕ ಬೇರುಮಟ್ಟದಲ್ಲೇ ಕೃಷಿಕರಿಗೆ ಬೆಂಬಲ, ಕೃಷಿಗೆ ಉತ್ತೇಜನ ನೀಡುತ್ತಿದೆ.

ಸಾಂದರ್ಭಿಕ ಕೃಷಿ ಚಟುವಟಿಕೆಗಳಿಗೆ ನೆರವಾಗುವಂತೆ ಅಲ್ಪಾವಧಿ ಕೃಷಿ ಸಾಲಗಳನ್ನು ನೀಡುವುದಕ್ಕೆ ನಮ್ಮ ಬ್ಯಾಂಕ್ ಪ್ರಾರಂಭದಿಂದಲೂ ಆದ್ಯತೆ ನೀಡುತ್ತಾ ಬಂದಿದೆ. ಜೊತೆಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಬೆಂಬಲ ನೀಡುವಂತೆ ಹಣಕಾಸಿನ ನೆರವು ಒದಗಿಸುತ್ತಾ ಕೃಷಿಕರ ವಲಯದಲ್ಲಿ ಮನ್ನಣೆ ಗಳಿಸಿದೆ. ಪ್ರಸ್ತುತ ನಮ್ಮ ಬ್ಯಾಂಕ್ ೧೬೪೯ ಸಹಕಾರಿ ಸಂಘಗಳನ್ನು ಸದಸ್ಯರನ್ನಾಗಿ ಹೊಂದಿದ್ದು ಒಟ್ಟು ೫೧೩೫.೧೧ ಲಕ್ಷ ರೂಪಾಯಿಗಳ ಷೇರು ಬಂಡವಾಳ ಹೊಂದಿದೆ.

ತಂತ್ರಜ್ಞಾನಕ್ಕೆ ತಕ್ಕಂತೆ ತನ್ನ ಕಾರ್ಯವೈಖರಿಯನ್ನೂ ಬದಲಾಯಿಸಿಕೊಂಡಿರುವ ನಮ್ಮ ಸಂಸ್ಥೆ ಕೋರ್ ಬ್ಯಾಂಕಿಂಗ್ ಪದ್ದತಿ ಅಳವಡಿಸಿಕೊಂಡಿದ್ದು ಆರ್.ಟಿ.ಜಿ.ಎಸ್/ನೆಫ್ಟ್/ಎ.ಟಿ.ಎಂ ಮೊದಲಾದ ಸೇವೆಗಳನ್ನು ಅತ್ಯಂತ ಸಮರ್ಪಕವಾಗಿ, ಚ್ಯುತಿಯಿಲ್ಲದಂತೆ ನಿರ್ವಹಿಸುತ್ತಿದೆ.

ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸೇವಾ ಕೇಂದ್ರಗಳೂ ಗ್ರಾಹಕರಿಗೆ ಅತ್ಯುತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿವೆ ಎಂಬ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಜಾಯಿಂಟ್ ಲಯೇಬಿಲಿಟಿ ಗ್ರೂಫ್, ಸ್ವ-ಸಹಾಯ ಸಂಘ, ಸ್ವರ್ಣಜ್ಯೋತಿ ಗ್ರಾಮ ಸ್ವರೋಜ್‌ಗಾರ್ ಯೋಜನೆಯಂತಹ ಅನೇಕ ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿಯೂ ನಮ್ಮ ಬ್ಯಾಂಕ್ ಸಕ್ರಿಯವಾಗಿ ದುಡಿಯುತ್ತಿದೆ.

ನಮ್ಮ ಬ್ಯಾಂಕ್‌ನ ಎಲ್ಲಾ ಚಟುವಟಿಕೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿರುವುದಕ್ಕೆ ಕಾರಣ ನಮ್ಮ ದಕ್ಷ ಆಡಳಿತ ವ್ಯವಸ್ಥೆ. ಬ್ಯಾಂಕ್‌ನ ಚಟುವಟಿಕೆಗಳನ್ನು ಗಮನಿಸಿ ಸಲಹೆ-ಸೂಚನೆಗಳನ್ನು ನೀಡಿ ತಿದ್ದಲು ೧೯ ಮಂದಿ ಸದಸ್ಯರನ್ನೊಳಗೊಂಡ ಬೋರ್ಡ್ ಆಫ್ ಡೈರೆಕ್ಟರ್ ರಚಿಸಲಾಗಿದೆ. ನಮ್ಮ ಬ್ಯಾಂಕ್‌ನ ಸಿಬ್ಬಂದಿ ಹಾಗೂ ನಮಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡುವ ನಮ್ಮ ಸಂಸ್ಥೆಯ ಪೋಷಕರು ಈ ಬೋರ್ಡ್‌ನಲ್ಲಿದ್ದು ಬ್ಯಾಂಕ್ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಲು ನೆರವಾಗುತ್ತಿದ್ದಾರೆ.
ಇಂತಹ ಒಂದು ಸಮರ್ಥ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವ ಅವಕಾಶ ನನ್ನ ಪಾಲಿಗೆ ಬಂದಿರುವುದು ನನಗೆ ಹೆಮ್ಮೆ ತಂದಿರುವುದ ಜೊತೆಗೆ ಗುರುತರ ಜವಾಬ್ದಾರಿಯನ್ನೂ ನೀಡಿದೆ.

ನಮ್ಮ ಸಂಸ್ಥೆಯ ಗ್ರಾಹಕರು ಈ ಯಶಸ್ಸಿನ ಜೊತೆಗಾರರಾಗಿರುವುದಕ್ಕೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಸ್ಥಾಪನೆಯಾದಾಗಿನಿಂದಲೂ ನಮ್ಮ ಬ್ಯಾಂಕ್ ಮೈಸೂರು ಭಾಗದ ಕೃಷಿ ವಯಲಕ್ಕೆ ತಕ್ಕುದಾದ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇನ್ನು ಮುಂದೆಯೂ ಈ ವೈಖರಿಯನ್ನು ಮುಂದುವರೆಸಿಕೊಂಡು ಹೋಗುವ ಭರವಸೆ ನೀಡುತ್ತೇವೆ. ಜೊತೆಗೆ ಇನ್ನೂ ಅತ್ಯುತ್ತಮ ಗುಣಮಟ್ಟದ ಹಲವು ಸೇವಾ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುವ ಮಟ್ಟಕ್ಕೆ ಸಂಸ್ಥೆಯನ್ನು ಬೆಳೆಸಬೇಕೆಂಬ ನನ್ನ ಧ್ಯೇಯಕ್ಕೆ ನಿಮ್ಮೆಲ್ಲರ ಸಹಕಾರವಿರುತ್ತದೆ ಎಂಬ ನಂಬಿಕೆ ನನ್ನದು.

ನನಗೆ ಈ ಗುರುತರ ಜವಾಬ್ದಾರಿಯನ್ನು ನೀಡಿ ಹರಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಅರ್ಪಿಸುತ್ತಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಯೋಚನೆ-ಯೋಜನೆಗಳನ್ನು ಜಾರಿಗೊಳಿಸುವಲ್ಲಿ ನಿಮ್ಮ ಬೆಂಬಲ-ಸಹಕಾರ ಸದಾ ನನ್ನ ಜೊತೆಗಿರಲಿ ಎಂದು ಬಯಸುತ್ತೇನೆ.

ದೇಶದ ಕೃಷಿ ಸಾಲ ಸೇವಾ ಬ್ಯಾಂಕಿಂಗ್ ವಲಯದಲ್ಲಿ ’ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್’ನ ಹೆಸರು ಮುಂಚೂಣಿಯಲ್ಲಿರಬೇಕೇಂಬ ಧ್ಯೇಯಕ್ಕೆ ಬದ್ಧರಾಗಿ ನಾವೆಲ್ಲಾ ಒಂದಾಗಿ ದುಡಿಯಬೇಕಿದೆ.