ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳು ಹಾಗೂ ಸ್ವ ಸಹಾಯ ಗುಂಪುಗಳ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 3 ತಿಂಗಳ ವರೆಗೆ ವಿಸ್ತರಿಸಲು ಮನವಿ

ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಎಂಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ. ಡಿ ಹರೀಶ್ ಗೌಡ ಅವರು ಮಾನ್ಯ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರನ್ನು ಭೇಟಿ ಮಾಡಿದರು. ಬ್ಯಾಂಕಿನಿಂದ 2020-21 ನೇ ಸಾಲಿನಲ್ಲಿ 80,368 ಜನ ರೈತರಿಗೆ ರೂ.74916.36 ಲಕ್ಷಗಳ ಕೆ.ಸಿ.ಸಿ. ಸಾಲ, 1129 ಜನ ರೈತರಿಗೆ ರೂ.2810.20 ಲಕ್ಷಗಳ ಮಧ್ಯಮಾವದಿ ಸಾಲ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಕಾಯಕ ಯೋಜನೆಯಡಿಯಲ್ಲಿ *ಜೋಡಣೆ* ಸಾಲ ನೀಡಿದ್ದು, ಈ ಸಾಲಗಳಿಗೆ ಸರ್ಕಾರದ ಬಡ್ಡಿ ಸಹಾಯಧನದ ಸೌಲಭ್ಯವಿರುತ್ತದೆ. ಆದರೆ ಈಗ ಕೋವಿಡ್-19 ರ ಸಾಂಕ್ರಾಮಿಕ ರೋಗದ ಕಾರಣ ಈಗಾಗಲೇ 15 ದಿನಗಳ ಕಾಲ ಕರ್ಫ್ಯೂ ಇದ್ದು, ಸಾಂಕ್ರಾಮಿಕ ರೋಗ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರಿಗೆ ಹಾಗೂ ಸ್ವ ಸಹಾಯ ಗುಂಪುಗಳಿಗೆ ಸಾಲ ಮರುಪಾವತಿ ಕಷ್ಟಕರವಾಗಿರುತ್ತದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದೆ ಸಾಲ ಸುಸ್ತಿಯಾದರೆ ಸುಸ್ತಿ ಸಾಲಗಳಿಗೆ ಸರ್ಕಾರದಿಂದ ಬಡ್ಡಿ ಸಹಾಯಧನ ದೊರೆಯುವುದಿಲ್ಲ. ಈ ರೀತಿಯಾದಲ್ಲಿ ರೈತರು ಸಾಲ ಪಡೆದ ದಿನಾಂಕದಿಂದ ಪೂರ್ಣ ಬಡ್ಡಿಯೊಡನೆ ಸಾಲ ಮರುಪಾವತಿಸಬೇಕಾಗುತ್ತದೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 30.06.2021 ರ ವರೆಗೆ ವಾಯಿದೆ ಇರುವ ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳು ಹಾಗೂ ಸ್ವ ಸಹಾಯ ಗುಂಪುಗಳ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 3 ತಿಂಗಳ ವರೆಗೆ ವಿಸ್ತರಿಸಿದಲ್ಲಿ, ಈಗಾಗಲೇ ಕೋವಿಡ್-19 ರ ಸಂಕಷ್ಟದಲ್ಲಿರುವ ರೈತ ಹಾಗೂ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕವಾಗಿ ಸಹಾಯವಾಗುವುದರಿಂದ ಮರುಪಾವತಿ ಅವಧಿಯನ್ನು ವಿಸ್ತರಿಸಬೇಕಾಗಿ ಕೋರಿದರು.